Saturday, April 23, 2011

ಆಕಾಶ ಖಾಲಿಯಾಗುವುದಿಲ್ಲ!

ಆಕಾಶ ಖಾಲಿಯಾಗುವುದಿಲ್ಲ!
ಬಂದೇ ಬರುತ್ತಾನೆ, ಅವನು
ಸಂಜೆ ಮನೆ ಬಿಟ್ಟು ಮಾರು ದೂರ
ಓಡಿ ಹೋದವನು.

ಹಕ್ಕಿಗಳಂತೆ ರೆಕ್ಕೆ ಪುಕ್ಕ ಕಟ್ಟಿಕೊಂಡು
ಹಾರಲಾರದ ಮುಗ್ಧತೆಯಲ್ಲಿ
ಮನಸೋ ಇಚ್ಚೆ ಹಾರಾಡಿ, ಕೂಗಾಡಿ
ರಂಪ ಮಾಡಿ
ಬಯಲಿನಲ್ಲಿ ಬೀಡು ಬಿಟ್ಟ, ಕಾವಿ ಉಟ್ಟ
ಹಸಿ ಸಂನ್ಯಾಸಿ.

ಇವನಿಗೆ ಮಕ್ಕಳೂ ಮರಿಗಳೂ
ಇದ್ದಿದ್ದರೆ ಗೊತ್ತಾಗುತ್ತಿತ್ತು,
ಅಳುವ ಎಳೆಯ ತುಟಿಗಳಿಗೆ
ನಕ್ಷತ್ರಗಳ ಐಸ್ ಕ್ರೀಮ್ ತಿನ್ನಿಸುವುದು ಹೇಗೆಂದು
ಬಿಸಿ ಬೇಳೆ ಬಾತ್ ಗೆ
ಹುಸಿ ಮುನಿಸು ತೋರಿಸುವುದು ಹೇಗೆಂದು.

ಮನುಷ್ಯರೆ ಇಲ್ಲದ ಜಗತ್ತಿನಲ್ಲಿ ಅವನಿಗೇನಿದೆ ಮಣ್ಣು?
ಪ್ರೀತಿ ತೋರಿಸುವ ಕಣ್ಣು?
ಅದಮ್ಯ ಪ್ರೇಮ ಪರಿಧಿಯ ಬಿಟ್ಟು ನಡೆದು ಹೋಗಲು
ಅವನಿಗೆಲ್ಲಿದೆ ಕಾಲು?
ಬಂದೇ ಬರುತ್ತಾನೆ, ಇಂದಲ್ಲ, ನಾಳೆ.

-ಶುಭಾ, ಮರವಂತೆ


Monday, September 27, 2010

ಗುರುವು ಕಣ್ತೆರೆದ ಘಳಿಗೆ

ಗುರುವು ಕಣ್ತೆರೆದ ಘಳಿಗೆ

ಗುರುವು ಕಣ್ತೆರೆದ ಘಳಿಗೆ
ಅನಂತ ಭೂಮಿ ಆಕಾಶಕ್ಕೆ ಸಂಚಲನೆ
ಅರಿವಿನ ಹರಿವು ಒಳಗೆಲ್ಲ ಬೆಳಕು, ಆವಾಹಿ...
ಗವಾಯಿ ಸತ್ ಚಿತ್ ಪ್ರಭೆಯಲ್ಲಿ
ಅಂಧತ್ವಕ್ಕೆ ಆನಂದ ಭಾಷ್ಪ.
ಓ ಪರಮ ವಿರಾಗಿ,
ಒಮ್ಮೆ ನುಸುಳಿ ಬಿಡು ಅಂತರಾಳಕ್ಕೆ
ಸಂಬಂಧಗಳ ಬಿರುಕು ಬಿಟ್ಟ
ಬೆಟ್ಟ ಗುಡ್ಡಗಳ ಗವಿ ಕಂದರಕ್ಕೆ
ಮಾನವತ್ವದ ಹೂವು ಕಮರಿ ಹೋಗುವ ಮುನ್ನ
ನಿರಾಧಾರ ಬದುಕಿಗೆ ಒಂದಿಷ್ಟು ದಾರಿ ತೋರಿಬಿಡು.
ಹರಿಸು ಗಾನದ ಸುಧೆಯ
ದಶ ದಿಕ್ಕಲೂ ಮೊಳಗುವ ನಿನ್ನ
ದಶವಾದ್ಯ - ರುದ್ರವೀಣೆಯ ಸ್ವರ ಸ್ವರದ ಸರಿಗಮವ
ಒಕ್ಕೂರಲ ಉದ್ಘೋಷವಾಗಿ ಬರುವಂತೆ ಹರಸು ಹೇ ನಾದ ದಾಸೋಹಿ.
ಪುಟ್ಟ ರಾಜ ಹೆಜ್ಜೆಯಲಿ ಅಸಮಾನತೆಯ
ಗುಡಿ ಗೋಪುರಗಳ ಹೊಸಕಿಬಿಡು
ಇನ್ನಿಲ್ಲದಂತೆ ನೆಲ ಕಚ್ಚಬೇಕು ಅಪಮಾನ, ಕೀಳರಿಮೆ.
ಜಂಗಮತ್ವಕ್ಕೆ ಜೋಳಿಗೆ ಹಿಡಿದು ಹಿಂತಿರುಗದೆ ಹೊರಟ
ಬಯಲ ಭಿಕ್ಷು,
ಬರಿ ಬೇಗುದಿಯ ಬೇಳೆ ಕಾಳುಗಳ
ನಿನ್ನೊಂದಿಗೇ ಹೊತ್ತು, ಸೂರ್ಯ ಶಿಖರದ ಕಡೆಗೆ ನಡೆದು ಬಿಟ್ಟೆ,
ಅನಾಥವಾಗಿಸಿ ಈ ಬಾಳ ಬಟ್ಟೆ.
ಹುಟ್ಟಿ ಬಾ ಇನ್ನೊಮ್ಮೆ ಸಮಾಧಿಯೊಳಗಿಂದ
ಕಾಯುತಿದೆ ನಿನಗೆ ಕಾಲ
ಸಹಸ್ರ ಸಹಸ್ರ ಸುವರ್ಣ ತುಲಾಭಾರ ಹೊತ್ತು.
_ಡಾ. ಶುಭಾ, ಮರವಂತೆ